ರಾಷ್ಟ್ರೀಯ ಸೇವಾ ಯೋಜನೆ  -
ಯುವಜನತೆಗೆ ಸಂಬಂಧಿಸಿದ ಉದಾತ್ತವಾದ ಮೌಲ್ಯಾಧಾರಿತ ಯೋಜನೆ ನ್ಯಾಷನಲ್ ಸರ್ವಿಸ್ ಸ್ಕೀಮ್ (ಎನ್.ಎಸ್.ಎಸ್.). ಯುವಜನತೆ ರಾಷ್ಟ್ರದ ಅತ್ಯುತ್ತಮ ನಾಗರಿಕರಾಗಿ ರಾಷ್ಟ್ರ ನಿರ್ಮಾಣದಲ್ಲಿ, ಅದರಲ್ಲಿಯೂ ಗ್ರಾಮೀಣ ಅಭಿವೃದ್ಧಿಯಲ್ಲಿ ನೇರವಾಗಿ ಪಾಲ್ಗೊಳ್ಳಬೇಕೆಂಬ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸಾಗಿಸಲು ಮೂಡಿಬಂದ ಯೋಜನೆ ಇದಾಗಿದೆ. ಇದರ ಗುರಿ ಸಮುದಾಯ ಸೇವೆಯ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ. ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಮೂಲ ಸ್ವಭಾವ, ಪ್ರವೃತ್ತಿಗಳಲ್ಲಿ ಪರಿವರ್ತನೆಯನ್ನುಂಟುಮಾಡಿ ಯುವಕರ ಉಜ್ಜ್ವಲವಾದ ವ್ಯಕ್ತಿತ್ವ ನಿರ್ಮಾಣಕಾರ್ಯದಲ್ಲಿ ಅತ್ಯಂತ ಫಲಪ್ರದವಾಗಿ ಮತ್ತು ಯಶಸ್ವಿಯಾಗಿ ಬೆಳೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ಸಾಧನೆ ಇಡೀ ರಾಷ್ಟ್ರದಲ್ಲಿ ಜನಪ್ರಿಯವಾಗಿದೆ.

ಈ ಯೋಜನೆಯು 1969 ಸೆಪ್ಟೆಂಬರ್ 24ರಂದು ಆರಂಭವಾಯಿತು. ಪ್ರಾರಂಭದಲ್ಲಿ 37 ವಿಶ್ವವಿದ್ಯಾಲಯಗಳಲ್ಲಿ 40,000 ಸ್ವಯಂ ಸೇವಕರೊಂದಿಗೆ ಪ್ರಾರಂಭವಾಗಿ ಇಂದು ದೇಶದ 250ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ನಿರ್ದೇಶನಾಲಯಗಳಲ್ಲಿ ಸು. 20 ಲಕ್ಷ ಸ್ವಯಂ ಸೇವಕರು ಈ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ದೇಶದ ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಶಾಶ್ವತ ಆಸ್ತಿಯನ್ನು ಸೃಷ್ಟಿಮಾಡಿ, ಗ್ರಾಮೀಣ ಜನರ ಜೀವನಮಟ್ಟವನ್ನು ಸುಧಾರಿಸಲು ಕಾಲೇಜುಗಳಲ್ಲಿನ ಯುವಶಕ್ತಿಯನ್ನು ಬಳಸಿಕೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಅಕ್ಷರ, ಆರೋಗ್ಯ, ಸ್ವಚ್ಛತೆ, ಉತ್ತಮ ಪರಿಸರ ಇತ್ಯಾದಿಗಳ ಬಗ್ಗೆ ತಿಳಿವಳಿಕೆ ನೀಡುವುದು, ಮೂಢನಂಬಿಕೆ, ಅಸ್ಪøಶ್ಯತೆ, ವರದಕ್ಷಿಣೆ, ಜನಸಂಖ್ಯೆ ಹೆಚ್ಚಳ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಹಾಗೂ ಮಲೇರಿಯ, ಕ್ಯಾನ್ಸರ್, ಕುಷ್ಠರೋಗ, ಏಡ್ಸ್ ಮುಂತಾದ ರೋಗಗಳ ಬಗ್ಗೆ ಅರಿವು ಮೂಡಿಸುವುದು ಇದರ ಮೂಲ ಉದ್ದೇಶ. ಯುವಜನರಲ್ಲಿ ಸೇವಾ ಮನೋಭಾವನೆಯನ್ನು ಮೂಡಿಸುವುದು, ಸಮಾಜದ ಋಣವನ್ನು ತೀರಿಸಲು ಸಿದ್ಧಪಡಿಸುವುದು, ಬಡವರು, ದೀನದಲಿತರು ಮತ್ತು ಸಹಾಯದ ಅವಶ್ಯಕತೆ ಇರುವ ಜನರಿಗೆ ಕೈಲಾದ ಸಹಾಯ ಮಾಡಲು ಸ್ವಯಂ ಸೇವಕರಲ್ಲಿ ಪ್ರೇರಣೆ ನೀಡುವುದು ಈ ಯೋಜನೆಯ ಕೆಲವು ಮುಖ್ಯ ಉದ್ದೇಶಗಳಾಗಿವೆ.

ಕಾಲೇಜು ವಿದ್ಯಾರ್ಥಿಗಳನ್ನು ದತ್ತು ಗ್ರಾಮಗಳಿಗೆ ಹಾಗೂ ಕೊಳೆಗೇರಿಗಳಿಗೆ ಕರೆದೊಯ್ದು ಹೊಸ ರಸ್ತೆಗಳ ನಿರ್ಮಾಣ, ಹಳೆಯ ರಸ್ತೆಗಳನ್ನು ದುರಸ್ತುಗೊಳಿಸುವುದು, ಚರಂಡಿಗಳ ನಿರ್ಮಾಣ, ಆಟದ ಮೈದಾನ ನಿರ್ಮಾಣ, ಅಂಗನವಾಡಿ ಕಟ್ಟಡ, ಶಾಲಾ ಕಾಂಪೌಂಡ್, ಸುಲಭ ಶೌಚಾಲಯಗಳ ನಿರ್ಮಾಣ, ಸ್ವಚ್ಛತಾ ಕಾರ್ಯಕ್ರಮ, ಗಿಡಮರಗಳನ್ನು ನೆಡುವುದು ಮುಂತಾದ ಶ್ರಮದಾನ ಚಟುವಟಿಕೆಗಳಲ್ಲಿ ತೊಡಗಿಸಿದಾಗ ಗ್ರಾಮೀಣ ಪ್ರದೇಶಗಳಲ್ಲಿ ಶಾಶ್ವತ ಆಸ್ತಿಯ ಸೃಷ್ಟಿಯ ಜೊತೆಗೆ ಅವರಲ್ಲಿ ಶ್ರಮ ಮೌಲ್ಯದ ಅರಿವು ಉಂಟಾಗುತ್ತದೆ, ಸಾಮಾಜಿಕ ಜಾಗೃತಿ ಉಂಟಾಗುತ್ತದೆ.
ಈ ಯೋಜನೆಯಲ್ಲಿ ಸ್ವಯಂ ಸೇವಕರನ್ನು ಶ್ರಮದಾನದ ಜೊತೆಗೆ ಅನೇಕ ರೀತಿಯ ಸಾಹಿತ್ಯಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿಯೂ ತೊಡಗಿಸಲಾಗುತ್ತದೆ. ವಿವಿಧ ಶಿಬಿರಗಳಲ್ಲಿ ತಮ್ಮ ಕಾಲೇಜು, ವಿಶ್ವವಿದ್ಯಾಲಯ ಹಾಗೂ ರಾಜ್ಯಗಳನ್ನು ಪ್ರತಿನಿಧಿಸುವ ಸ್ವಯಂ ಸೇವಕರಲ್ಲಿ ನಾಯಕತ್ವ ಗುಣ ಬೆಳೆಯಲು, ಆತ್ಮವಿಶ್ವಾಸ ಮೂಡಲು ಇಂಥ ಶಿಬಿರಗಳು ನೆರವಾಗುತ್ತವೆ.
ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಸಮುದಾಯದತ್ತ ಕರೆದೊಯ್ಯುತ್ತವೆ. ಇಂಥ ಚಟುವಟಿಕೆಗಳಿಂದ ಎಲ್ಲರೂ ಒಂದು ಎಂಬ ಭಾವನೆ ಉಂಟಾಗಿ ರಾಷ್ಟ್ರೀಯ ಭಾವೈಕ್ಯತೆ ಮತ್ತು ರಾಷ್ಟ್ರಪ್ರೇಮ ಬೆಳೆಯಲು ಸಾಧ್ಯವಾಗುತ್ತದೆ. 	
(ಜಿ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ